ಫೋರ್ಡ್, ಜಾನ್
	 1586-1640? ಇಂಗ್ಲಿಷ್ ನಾಟಕಕಾರ. ಹುಟ್ಟಿದ ವರ್ಷ ತಿಳಿಯದು. ಕ್ರೈಸ್ತನಾಮಕರಣವಾದ್ದು 1586ರಲ್ಲಿ. ತಂದೆಗೆ ಶಾಂತಿ ಆಯೋಗದಲ್ಲಿ ಉದ್ಯೋಗ; ತಾಯಿ ಹೆಸರಾಂತ ಅಟಾರ್ನಿ ಜನರಲ್ ಮತ್ತು ಶ್ರೇಷ್ಠ ನ್ಯಾಯಮೂರ್ತಿ ಪಾಫಾಮನ ಸಹೋದರಿ. ಎಕ್ಸಿಟರ್ ಕಾಲೇಜಿನಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ (1601) ಮಾರನೆಯ ವರ್ಷ ಮಿಡ್ಲ್ ಟೆಂಪಲ್ ಅಧ್ಯಯನ ಸಂಸ್ಥೆಗೆ ಸೇರಿದ. ಆಗ ಕೆಲವು ಕವಿತೆಗಳನ್ನು ಬರೆದುದುಂಟು. 

	ಈತ ನಾಟಕಕಾರನಾದದ್ದು ಬಹುಶಃ ಥಾಮಸ್ ಡೆಕರ್‍ನ ಸಹಕಾರದಿಂದ. ದಿ ಫೇರಿ ನೈಟ್ ಮತ್ತು ಬ್ರಿಸ್ಟೊ ಮರ್ಚೆಂಟ್ ನಾಟಕಗಳು ಡೆಕರ್‍ನ ಪೂರ್ಣ ಸಹಕಾರದೊಂದಿಗೆ ಬರೆದಂಥವು. ಈ ಎರಡೂ ನಾಟಕಗಳು ಪ್ರದರ್ಶಿತವಾದುವಾದರೂ ಪ್ರಕಾಶಗೊಳ್ಳಲಿಲ್ಲ. ಜಾನ್ ವೆಬ್ಸ್‍ಟರ್ ಎಂಬ ಇನ್ನೊಬ್ಬ ನಾಟಕಕಾರನೊಂದಿಗೆ ಈತ ಎ ಲೇಟ್ ಮರ್ಡರ್ ಆಪ್ ದಿ ಸನ್ ಅಸ್ ಆನ್ ದಿ ಮದರ್ ಎಂಬ ನಾಟಕ ಬರೆದ (1624). ಎನ್ ಇಲ್ ಬಿಗಿನಿಂಗ್ ಹ್ಯಾಸ್ ಎ ಗುಡ್ ಎಂಡ್ ಎಂಬುದು ಇನ್ನೊಂದು ನಾಟಕ (1613). ಇದು ಇವನ ಮೊದಲ ಸ್ವತಂತ್ರ ಕೃತಿ.

	ಫೋರ್ಡನ ದಿ ಲಂಡನ್ ಮರ್ಚೆಂಟ್ ಮತ್ತು ದಿ ರಾಯಲ್ ಕಾಂಬ್ಯಾಟ್ ಎಂಬ ನಾಟಕಗಳು ಮತ್ತು ಬ್ಯೂಟಿ ಇನ್ ಎ ಟ್ರಾನ್ಸ್ ಎಂಬ ದುರಂತನಾಟಕ ವಾರ್ ಬರ್ಟನ್ ಕುಕ್‍ನಿಂದ ನಾಶವಾದ ಗ್ರಂಥಗಳಲ್ಲಿ ಸೇರಿವೆ. ದಿ ಕ್ವೀನ್ ಅಥವಾ ದಿ ಎಕ್ಸೆಲೆನ್ಸಿ ಆಫ್ ದಿ ಸೀ ಎಂಬ ನಾಟಕ ಒಂದು ತರಹ ಏರಿಳಿತದ ಭಾವೋದ್ರೇಕದಿಂದ ಕೂಡಿದೆ. ಈ ಕಾಲಕ್ಕೂ ದಕ್ಕಿರುವ ಫೋರ್ಡ್‍ನ ಕೃತಿಗಳೆಂದರೆ, ದಿ ಲವರ್ಸ್ ಮೆಲಂಕಲಿ ಮತ್ತು ದಿ ಲೇಡೀಸ್ ಟ್ರಯಲ್ (1638 ರಲ್ಲಿ ಅಭಿನಯಿಸಲಾಯಿತು; 1639ರಲ್ಲಿ ಮುದ್ರಸಲಾಯಿತು.).

	ಈತನ ಇನ್ನೆರಡು ನಾಟಕಗಳಾದ ಇಟ್ ಈಸ್ ಎ ಪಿಟಿ ಷಿ ಈಸ್ ಎ ಹೋರ್ ಮತ್ತು ದಿ ಬ್ರೋಕನ್ ಹಾರ್ಟ್‍ಗಳಲ್ಲಿ ಇವನ ನಿಜವಾದ ಮೇಧಾಶಕ್ತಿ ವ್ಯಕ್ತವಾಗಿದೆ. ಮೊದಲ ನಾಟಕದಲ್ಲಿ ಸ್ವಗೋತ್ರ ಸಂಬಂಧ ನಾಟಕದ ವಸ್ತು. ದುರಂತವನ್ನು ಇಲ್ಲಿ ಬಹಳ ಗಂಭೀರವಾಗಿ ಚಿತ್ರಿಸಲಾಗಿದೆ. ಪಾತ್ರವಿನ್ಯಾಸ ಸ್ಪಷ್ಟವೂ ಸುವ್ಯಕ್ತವೂ ಆಗಿದೆ. ಸಮಸ್ಯೆಯನ್ನು ಗಂಭೀರವಾಗಿ ಚರ್ಚಿಸಲಾಗಿದೆ. ಕಾಮೋದ್ರೇಕ ಮತ್ತು ಅದನ್ನು ನಿರ್ಬಂಧಿಸುವ ಕಟ್ಟುಕಟ್ಟಳೆಗಳ ನಡುವಿನ ಹೋರಾಟ ಚೆನ್ನಾಗಿ ಚಿತ್ರಿತವಾಗಿದೆ. ಎರಡನೆಯದರ ವಸ್ತು ಭಾವೋದ್ರೇಕಕಾರಿ. ಇದರಲ್ಲಿ ವ್ಯಕ್ತವಾಗುವ ಕರುಣೆ ತುಂಬಾ ಪರಿಣಾಮಕಾರಿಯಾದುದು. 

	ಕೆಲವು ಕಡೆ ಬರುವ ವಿಷಯಲೋಲುಪತೆ ಅಥವಾ ಸ್ವಭ್ರಾಂತಿಯನ್ನು ಬಿಟ್ಟರೆ ಇವನ ಪ್ರತಿಭೆಯಲ್ಲಿ ನಿಜವಾದ ಇದೆ. 1630ರಲ್ಲಿ ಅಭಿಯಿಸಿದ ಲವರ್ಸ್ ಸ್ಯಾಕ್ರಿಫೈಸ್ ಇಂಥ ವಿಷಯಲೋಲುಪತೆಯನ್ನು ಹೊಂದಿದ ಒಂದು ದುರಂತನಾಟಕ. ಪರ್ಕಿನ್ ವಾರ್‍ಬೆಕ್ (1964) ನಾಟಕವನ್ನು ಹಾಸ್ಯ ಅಥವಾ ನಕಲಿ ಕಡಿಮೆ. ಇತರ ನಾಟಕಕಾರರೊಂದಿಗೆ ಸಹಕರಿಸಿ ಈತ ಬರೆದ ಇನ್ನೆರಡು ಕೃತಿಗಳೆಂದರೆ ದಿ ಮಾಸ್ಕ್ ಆಫ್ ದಿ ಸನ್ಸ್ ಡಾರ್ಲಿಂಗ್ ಮತ್ತು ದಿ ವಿಚ್ ಆಫ್ ಎಡ್‍ಮಂಟನ್.

	ಮಾನವ ಸಹಜವಾದ ಭಾವೋದ್ರೇಕ, ಕೋಪೋದ್ರೇಕ ಹಾಗೂ ಕಾಮೋದ್ರೇಕಗಳನ್ನು ತನ್ನ ನಾಟಕಗಳಲ್ಲಿ ಈತ ತುಂಬಿದ್ದಾನೆ. ಹೀಗೆ ಮಾಡುವುದು ಸುಲಭದ ಕೆಲಸವೇನಲ್ಲ. ಆದರೆ ನಾಟಕ ನೋಡಿದ ಮೇಲೆ ಉಳಿಯುವ ಪರಿಣಾಮ ಅಷ್ಟೇನೂ ಹಿತಕಾರಿಯಾದುದಲ್ಲ. ಆದ್ದರಿಂದ ಇವನ ನಾಟಕಗಳಿಗೆ ಈಗ ಸ್ಥಾನವಿಲ್ಲದಂತಾಗಿದೆ.
(ಎ.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ